ಹಾಪ್‍ಕಿನ್ಸ್, ಸರ್ ಫ್ರೆಡೆರಿಕ್ ಗೌಲ್ಯಾಂಡ್
 	1861-1947. ಜೀವಸತ್ತ್ವಗಳ (ವೈಟಮಿನ್) ಆವಿಷ್ಕಾರಕ್ಕಾಗಿ (ಕ್ರಿಶ್ಚಿಯಾನ್ ಐಕ್‍ಮ್ಯಾನ್‍ನೊಂದಿಗೆ (1858-1930)) ವೈದ್ಯವಿಜ್ಞಾನ ನೊಬೆಲ್ ಪಾರಿತೋಷಿಕ ಪುರಸ್ಕøತ (1929) ಬ್ರಿಟಿಷ್ ಜೀವರಸಾಯನವಿಜ್ಞಾನಿ. ಇಂಗ್ಲೆಂಡ್‍ನ ಈಸ್ಟ್‍ಬೌರ್ನ್‍ನಲ್ಲಿ 1861 ಜೂನ್ 20ರಂದು ಜನಿಸಿದ. ಲಂಡನ್ ಸ್ಕೂಲ್‍ನಲ್ಲಿ ಶಾಲಾ ಶಿಕ್ಷಣ ಪಡೆದ(1871-78). ಆರು ತಿಂಗಳುಗಳ ಕಾಲ ವಿಮೆ ಗುಮಾಸ್ತನಾಗಿದ್ದ. ಅನಂತರ ಲಂಡನ್‍ನ ರಾಯಲ್ ಸ್ಕೂಲ್ ಆಫ್ ಮೈನ್ಸ್‍ನಲ್ಲಿ ರಸಾಯನವಿಜ್ಞಾನದ ಅಧ್ಯಯನ ಕೈಗೊಂಡ. ಲಂಡನ್‍ನ ಯೂನಿವರ್ಸಿಟಿ ಕಾಲೇಜಿನಲ್ಲಿ ಅಧ್ಯಯನದ ಮುಂದುವರಿಸಿದ. ಇನ್‍ಸ್ಟಿಟ್ಯೂಟ್ ಆಫ್ ಕೆಮಿಸ್ಟ್ರಿಯ ಅಸೋಸಿಯೇಟ್‍ಶಿಪ್ ಪರೀಕ್ಷೆಯಲ್ಲಿ ತೇರ್ಗಡೆಯಾದ. ಗೃಹ ಇಲಾಖೆಯಲ್ಲಿ ವಿಶ್ಲೇಷಣಾತ್ಮಕ ರಸಾಯನವಿಜ್ಞಾನ ಸಹಾಯಕನ ಹುದ್ದೆಯಲ್ಲಿದ್ದ(1883). ಕಾಲೇಜು ವಿದ್ಯಾಭ್ಯಾಸ ಮುಂದುವರಿಕೆ, ಸ್ನಾತಕ ಪದವಿ ಗಳಿಕೆ. ಅನಂತರ ಲಂಡನ್‍ನ ಗೈಸ್ ಆಸ್ಪತ್ರೆಯಲ್ಲಿ ವೈದ್ಯವಿಜ್ಞಾನ ವಿದ್ಯಾರ್ಥಿಯಾಗಿ ದಾಖಲಾತಿ (1888). ವಿದ್ಯಾರ್ಥಿಯಾಗಿದ್ದಾಗಲೇ ರಸಾಯನವಿಜ್ಞಾನದಲ್ಲಿ ಚಿನ್ನದ ಪದಕ ಮತ್ತು ಔಷಧವಸ್ತುವಿಜ್ಞಾನದಲ್ಲಿ (ಮೆಟೀರಿಯ ಮೆಡಿಕ) ಆನರ್ಸ್ ಗೌರವ ಪ್ರಾಪ್ತಿ. ವೈದ್ಯವಿಜ್ಞಾನ ಸ್ನಾತಕ ಪದವಿ ಗಳಿಕೆ (1894). ನಾಲು ವರ್ಷಗಳ ಕಾಲ ಗೈಸ್ ಆಸ್ಪತ್ರೆಯಲ್ಲಿ ಶರೀರಕ್ರಿಯಾವಿಜ್ಞಾನ ಮತ್ತು ವಿಷವಿಜ್ಞಾನ ಅಧ್ಯಾಪನ ವೃತ್ತಿ. ಎರಡು ವರ್ಷಗಳ ಕಾಲ ಕ್ಲಿನಿಕಲ್ ರಿಸರ್ಚ್ ಅಸೋಸಿಯೇಶನ್‍ನ ರಸಾಯನವಿಜ್ಞಾನ ವಿಭಾಗದ ಮುಖ್ಯಸ್ಥನ ಜವಾಬ್ದಾರಿ ನಿರ್ವಹಣೆ.

	ಎಚ್. ಡಬ್ಲ್ಯು. ಬ್ರೂಕ್ ಎಂಬಾತನೊಡಗೂಡಿ ಪ್ರೋಟೀನ್‍ನ ಹ್ಯಾಲೊಜನ್ ನಿಷ್ಪನ್ನಗಳ (1896), ಎಸ್. ಎನ್. ಪಿಂಕಸ್ ಎಂಬಾತನೊಡಗೂಡಿ ರಕ್ತ ಆಲ್ಬುಮಿನ್‍ಗಳ ಸ್ಫಟಿಕೀಕರಣ (1898) ಕುರಿತಾದ ಸಂಶೋಧನ ಪ್ರಬಂಧಗಳ ಪ್ರಕಟಣೆ. ಶರೀರಕ್ರಿಯಾವಿಜ್ಞಾನದ ರಾಸಾಯನಿಕ ಆಯಾಮಗಳನ್ನು ವಿಕಸಿಸಲೋಸುಗ ಕೇಂಬ್ರಿಜ್‍ನಲ್ಲಿ ಅಧ್ಯಾಪನ ವೃತ್ತಿ ಸ್ವೀಕಾರ. ಆದಾಯ ಹೆಚ್ಚಿಸಿಕೊಳ್ಳಲೋಸುಗ ಖಾಸಗಿ ಬೋಧನೆ ಮತ್ತು ಗೃಹ ಇಲಾಖೆಯಲ್ಲಿ ಅರೆಕಾಲಿಕ ಗುಮಾಸ್ತವೃತ್ತಿ. ಜೀವರಸಾಯನವಿಜ್ಞಾನ ರೀಡರ್ ಹುದ್ದೆ (1902), ಟ್ರಿನಿಟಿ ಕಾಲೇಜಿನ ಫೆಲೊಶಿಪ್ ಮತ್ತು ಎಮ್ಯಾನ್ಯುಯೆಲ್ ಕಾಲೇಜಿನ ಗೌರವ ಫೆಲೊಶಿಪ್ ಪ್ರಾಪ್ತಿ (1910). ಕೇಂಬ್ರಿಜ್ ವಿಶ್ವವಿದ್ಯಾಲಯದ ಜೀವರಸಾಯನವಿಜ್ಞಾನ ಮುಖ್ಯಸ್ಥನಾಗಿ ಆಯ್ಕೆ (1914).

	ಪ್ರೋಟೀನ್‍ನಿಂದ ಟ್ರಿಪ್ಟೋಫೇನ್ ಅಮೈನೊ ಆಮ್ಲವನ್ನು ಪ್ರತ್ಯೇಕಿಸಿ ಆವಿಷ್ಕರಿಸಿದ್ದು (1901) ಮತ್ತು ಅದು ಮತ್ತು ಇತರ ಕೆಲವು ಅಮೈನೊ ಆಮ್ಲಗಳು ಪ್ರಾಣಿದೇಹದಲ್ಲಿ ತಯಾರಾಗುವುದಿಲ್ಲ ಹಾಗೂ ಅವು ಆಹಾರದ ಮೂಲಕ ಪೂರೈಕೆ ಆಗಬೇಕು ಎಂದು ಸಾಧಿಸಿದ್ದು (1906-07) ಈತನ ಪ್ರಮುಖ ಕೊಡುಗೆಗಳು. ಅತ್ಯಾವಶ್ಯಕ ಅಮೈನೊ ಆಮ್ಲಗಳು ಅಥವಾ ಸಹಾಯಕ ಪದಾರ್ಥಗಳು ಎಂದು ಉಲ್ಲೇಖಿಸುತ್ತಿದ್ದ ಇವೇ ಮುಂದೆ (ಸು. 1912) ಜೀವಸತ್ತ್ವಗಳು ಎಂದು ಪ್ರಸಿದ್ಧವಾದವು. ಕಾರ್ಯನಿರತ ಸ್ನಾಯುಗಳಲ್ಲಿ ಲ್ಯಾಕ್ಟಿಕ್ ಆಮ್ಲ ಸಂಚಯಿಸುತ್ತದೆ ಎಂದು ಹಾಪ್‍ಕಿನ್ಸ್ ಮತ್ತು ವಾಲ್ಟರ್ ಫ್ಲೆಚರ್ ಸಿದ್ಧಪಡಿಸಿದ್ದು (1907) ಸ್ನಾಯು ಸಂಕುಚನೆಯ ರಸಾಯನವಿಜ್ಞಾನ ವಿಕಾಸದ ಬುನಾದಿಯಾಯಿತು. ಜೀವಂತ ಊತಕದಿಂದ ಟ್ರೈಪೆಪ್ಟೈಡ್ ಗ್ಲುಟಥಯೋನನ್ನು ಪ್ರತ್ಯೇಕಿಸಿ ಅದು ಕೋಶದಲ್ಲಿ ಆಕ್ಸಿಜನ್ ಬಳಕೆಗೆ ಅತ್ಯಾವಶ್ಯಕ ಎಂದು ಈತ ಸಾಧಿಸಿದ (1921).

	ಈತ ವೃತ್ತಿಜೀವನದ ಬಹುಭಾಗ ಕಳೆದದ್ದು ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ (1898-1943). ಈತನಿಗೆ ನೈಟ್‍ಹುಡ್ (1925), ರಾಯಲ್ ಸೊಸೈಟಿಯ ಅಧ್ಯಕ್ಷ ಸ್ಥಾನ (1931) ಹಾಗೂ ಆರ್ಡರ್ ಆಫ್ ಮೆರಿಟ್ (1935) ಮೊದಲಾದ ಅನೇಕ ಗೌರವಾರ್ಥ ಪುರಸ್ಕಾರ ಮುಖೇನ ಪ್ರಪಂಚಮಾನ್ಯತೆ ಪ್ರಾಪ್ತವಾಯಿತು. ಈತ 1947 ಮೇ 16ರಂದು ನಿಧನನಾದ.	
(ಎಸ್.ಕೆ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ